Friday, January 25, 2013

ಸದಾ ಒಡಗೂಡಿ ಆಡಿ, ಹಾಡಿ, ಹಾಸಿ - ಹೊದ್ದ ಕ್ಷಣಗಳಿನ್ನೂ ಹಸಿರಾಗಿರುವಾಗಲೇ ಹಸೆಮಣೆಗೆ ಅಣಿಯಾಗುತ್ತಿರುವ ಅಂಗನೆಗೆ...

ಅಂದು ನನ್ನ ಹುಟ್ಟು ಹಬ್ಬ..  ಶುಭಾಶಯ,ಉಡುಗೊರೆ-ಹೀಗೆ ಸಂಭ್ರಮದಲಿ ಮುಳುಗಿ ಹೋಗಿದ್ದೆ ನಾನು. ಮೊಬೈಲ್ 'ಬೆಳದಿಂಗಳಂತೆ ಮಿನುಗಿತು'('ಬೆಳದಿಂಗಳಂತೆ ಮಿನುಮಿನುಗುತ' ಅದರ ರಿಂಗ್ ಟೋನ್ :P ) ಸಣ್ಣಗೆ ಗುಡುಗಿತ್ತು ಸಹ[vibration;)]!    ಹಲೋ ಎಂದಾಕ್ಷಣ ಕೇಳಿ ಬಂದದ್ದು 'ನಾನು ಸಹನಾ ಕಣೆ , ಹುಟ್ಟು ಹಬ್ಬದ ಶುಭಾಶಯ' (ಎಷ್ಟು ಸಾರಿ  ಕೇಳಿದರೂ ಬೇಜಾರಾಗದ ಸಾಲು ), ನಂತರ ಆಕೆ  ಹೇಳಿದ್ದು 'ನನ್ನ ಮದುವೆ  ಕಣೆ ಬರಲೇ ಬೇಕು'( ಎಷ್ಟು ಸಾರಿ ಕೇಳಿದರೂ  ನಂಬಲಾಗದ ಸಾಲು).
ಜೀವನ ಎಂದರೆ  ಬರಿ ಇಷ್ಟೇ ಅಲ್ಲ, 'ಮದುವೆ'  ಅಂತನೂ  ಒಂದಿದೆ  ಅಂತ  ನೆನಪಿಸಿದಳು ಈ ಹುಡುಗಿ!  ಹುಟ್ಟು  ಹಬ್ಬಕ್ಕೆ ಆತ್ಮೀಯರು ಬಾಹ್ಯ ಸೌಂದರ್ಯಕ್ಕೆಂದು ಏನೆಲ್ಲಾ ಉಡುಗೊರೆಯಾಗಿ ಕೊಟ್ಟರು, ಆದರೆ 'ಮದುವೆ' ಎಂಬುದಕ್ಕೆ ಮನಸ ಅಣಿಗೊಳಿಸಿಕೊಳಬೇಕೆಂದು ಈಕೆ ಕೊಟ್ಟ  ಮೌನ ಸಂದೇಶದ ಉಡುಗೊರೆ ಬಲು ವಿಶೇಷ :-)  ತಕ್ಷಣವೇ ಚಿತ್ತಕಿಳಿದ  ನೆನಪುಗಳ ಸಂತೆಯಿಂದ ಹೆಕ್ಕಿದಾಗ ಪದಗಳ ಬೊಗಸೆಯಲಿ ಸಿಕ್ಕ ಸಾಲುಗಳು ಇವಿಷ್ಟು:
              ಸದಾ  ಒಡಗೂಡಿ ಆಡಿ, ಹಾಡಿ, ಹಾಸಿ - ಹೊದ್ದ ಕ್ಷಣಗಳಿನ್ನೂ ಹಸಿರಾಗಿರುವಾಗಲೇ ಹಸೆಮಣೆಗೆ  ಅಣಿಯಾಗುತ್ತಿರುವ ಅಂಗನೆಗೆ...
 ದಿನಗಳು ಎಷ್ಟು ಬೇಗ  ಉರುಳಿದವು ಅಲ್ವಾ ! ಮೊನ್ನೆ ಮೊನ್ನೆ ಶಾಲೆಗೆ  ಹೋದ ನೆನಪು.. ಸರ್  ಬರೋವರೆಗೆ  ಚಳಿ ಕಾಯಿಸ್ತಿದ್ದಿದ್ದ ನೆನಪಿನ್ನೂ ಮಾಸಿಲ್ಲ! ಅವತ್ತು ಒಂದು ದಿನ ಸೂರ್ಯ ಎಂದಿಗಿಂತ ಚೂರು ಬೇರೆ ಕಾಣಿಸಿದ್ದಕ್ಕೆ ನಾವು ಮಾಡಿದ ಹೊಸ ಗ್ರಹದ ಅನ್ವೇಷಣೆಯಂತೂ  ಅವಿಸ್ಮರಣೀಯ. ಇನ್ನು ಚಿಕ್ಕೂ ಮರದಡಿ ಓದಲು ಕೂತು ಹರಟಿದ ದಿನಗಳು ಅವೆಷ್ಟೋ ! ವಾಲಿಬಾಲ್ cluster ಅಲ್ಲಿ ರೆಫ್ರೀ ನ ಬುಟ್ಟಿಗೆ ಹಾಕಿಕೊಂಡು ಎಲ್ಲರನ್ನೂ select ಮಾಡುವಂತೆ ಮಾಡಿದ ಮೋಡಿ ನೆನಪಿನ ಬುಟ್ಟಿಯಲ್ಲಿ ಇನ್ನೂ ಹಾಗೇ ಇದೆ.
              ಪ್ರೀತಿ, ಪ್ರೇಮ ಎನುತಿದ್ದವರ ಪರಿಹಾಸ್ಯ ಮಾಡುತಿದ್ದವರು ನಾವು. ಆದರೆ  ಈಗ ಅದೇ ನೀನು ಪತಿ, ಪೂಜೆ , ಪ್ರಾರ್ಥನೆ , ಪ್ರವಚನ  ಅಂತೆಲ್ಲಾ ಹೇಳುವ ಪ್ರಬುದ್ಧೆ . ಸ್ವಲ್ಪ ಹುಸಿಮುನಿಸು, ಸಾಗರದಷ್ಟು ಸಮಾಧಾನ, ಸಣ್ಣ ಹಠದ 'ಸನ್ನಿ' ಈಗ 'ಚಿರಂಜೀವಿ ಕುಮಾರಿ ಸೌಭಾಗ್ಯವತಿ'!!
ಮನದ ಲಜ್ಜೆ, ಅಳುಕು, ಖುಷಿಯ ಮಿಶ್ರಭಾವ ಬಿಂಬಿಸುವ ಮದರಂಗಿಯ ಚಿತ್ತಾರ, ಕುತೂಹಲ ಬೆರೆತ ಸಂಭ್ರಮದ ಗಟ್ಟಿಮೇಳ, ಜವಾಬ್ದಾರಿಯ ದಿವ್ಯಸಂಕೇತವಾಗಿ ಕರಿಮಣಿ-ಕಾಲುಂಗುರ, ಹಿರಿಯರ ಆಶೀರ್ವಾದದ ಮಂಗಲಾಷ್ಟಕದ ಮಂತ್ರಾಕ್ಷತೆ , ಪ್ರತಿ ಹೆಜ್ಜೆಗೂ ಜೊತೆ ಸಿಕ್ಕ ಸಂತಸವ ಸಾರುವ ಸಪ್ತಪದಿ- ಎಲ್ಲದರ ನಡುವೆ ಆರಂಭವಾಗಲಿರುವ ವೈವಾಹಿಕ ಜೀವನದ ದಿಬ್ಬಣ ಸದಾ ಸಿರಿಯಾಡುತ ಸಾಗುತಿರಲಿ ಗೆಳತಿ :-)

                                                                                                            -ಇಂತಿ
                                                                                                                  ಸಿರಿ 

No comments:

Post a Comment