Tuesday, January 31, 2012

SHEರಸಿಯಲ್ಲಿ SHEಯ ಮನೆ

ಅಂದು ಆದಿತ್ಯವಾರ. ಅಮ್ಮ ಕೇಳಿದ್ರು ತಿಂಡಿ ಏನ್ ಬೇಕಂತ. ಮನೇಲಿ ಏನೇನ್ ತಿನ್ಬೇಕು ಅಂದುಕೊಂಡಿದ್ನೋ ಎಲ್ಲ ತಿಂದಾಗಿತ್ತು. ಆಗ ನೆನಪಾಗಿದ್ದು ತೆಳವು ಬೆಲ್ಲ. ಹಾಗಂದಾಗ ನೆನಪಗೋದೆ ಶಿರಸಿ. ಹೀಗೆ ನಮ್ಮ ಪಯಣ ಶುರು ಆಯಿತು. ಹೋಗೋ ಮುಂಚೆ ಹೇಳೋಣ ಅಂತ  ಗೆಳತಿ ಉಷಾಳ ಮೊಬೈಲ ಗೆ  ಕರೆ ಮಾಡಿದ್ರೆ ತಾಗಲಿಲ್ಲ. ಈ ಮೊಬೈಲ್ ಗಳೇ ಹೀಗೆ ನೋಡಿ boyfriend ತರಹ. ಯಾವಾಗ ವ್ಯಾಪ್ತಿ ಪ್ರದೇಶದಿಂದ ಹೊರಗೋಗ್ತಾರೆ ಹೇಳಲಿಕ್ಕಾಗಲ್ಲ. ಅದೇ landline ಹಾಗಲ್ಲ. ಅದು ಪತಿ ತರ. 'ಏನೋ ಕೆಲವೊಮ್ಮೆ ಬೇರೆಯವರೊಡನೆ ವ್ಯಸ್ತರಾಗಿದ್ದಾರೆ' ಅಂತ ಬರಬಹುದು ಆದ್ರೆ ವ್ಯಾಪ್ತಿ ಪ್ರದೇಶದಿಂದ ಹೊರಗೆ ಹೋಗೋದು ಅತೀ ವಿರಳ. ಆದ್ದರಿಂದ landline ಗೆ ಕರೆ ಮಾಡಿ ತಿಳಿಸಿ ಮನೆ ವಿಳಾಸ ಕೇಳಿದ್ದು ಆಯಿತು. ಇಷ್ಟರಲ್ಲಿ ಶಿರಸಿ ಬಂತು. ಕುಳಿಮನೆ ದಾರಿ ಹಿಡಿದೆವು. ಅಲ್ಲಿ ಜನರು ಕುಳಿಮನೆಗೆ ಸೀದಾ ಹೋಗ್ಬೇಕು ಅಂತ ಹೇಳಿದ್ರು. ಹಾಗೆ ನಾವು ಹೊರಟೆವು. ಮೊದ ಮೊದಲು  ಒಂದೆರಡು ಹಳ್ಳಿ ಸಿಕ್ಕಂಗಾಯ್ತು. ಆಮೇಲಂತೂ ಎಲ್ಲೆಡೆ ಕಾಡು ಕಾಡೇ. ಅರ್ಧ ತಾಸಾದ್ರು  ಒಂದು ಮನೆಯಾಗಲೀ  ಮನುಷ್ಯರಾಗಲೀ  ಏನೂ ಕಣ್ಣಿಗೆ ಬೀಳಲಿಲ್ಲ. ನಮಗೆ ಗಡ ಗಡ ಶುರು ಆಯಿತು. ಮುಂದೆ ದಾರೀ ಆದರೂ ಇದೆಯೋ ಇಲ್ವೋ ಅಂತ ಸಹ ಗೊತ್ತಾಗ್ತಿಲ್ಲ. ಸಾಲದಂತೆ  ಕಾರ್ ಅಲ್ಲಿ ಪೆಟ್ರೋಲ್ ಬೇರೆ ಖಾಲಿ ಆಗ್ತಾ ಬಂದಿತ್ತು. ಅಂದ್ರೂ  ದೇವರ ಮೇಲೆ ಭಾರ ಹಾಕಿ ಹೊರಟೆವು. ಇದರ ಜೊತೆ  ಮಳೆ ಬೇರೆ. ಕಾರ್ ಅಲ್ಲಿ ಸಣ್ಣಗೆ ಹಾಡು ಕೇಳಿ ಬರ್ತಿತ್ತು. 'ಉಡಿಸಲೇ ಬೆಳಕಿನ ಸೀರೆಯ ' ಹಾಡು ಮುಗಿದು female version ಶುರು ಆಯಿತು. ಅದಕ್ಕೆ ನಮ್ಮ ಭ್ರಾತೃಶ್ರೀ ಅವ್ರು ಹೇಳಿದ್ದು "ಇಲ್ಲಿ ತನಕ ಅವ ಸೀರಿ ಉಡಿಸಿದ  ಇನ್ಮ್ಯಾಲ ಇಕಿ ಅಂಗಿ ಹಾಕ್ತಾಳನ". ಭಯ ಆವರಿಸಿದ್ದ ಆ ಸಮಯದಲ್ಲಿ ನಗು ಕೂಡ ಭಯದಿಂದ ಹಾಡು ಹೋದಂಗಿತ್ತು. ಹೀಗೆ ಹೋಗ್ತಾ ಕೊನೆಗೂ ದೇವರ ಹಾಗೆ ಒಬ್ರು ಅಜ್ಜ ಕಂಡರು. ಅವ್ರು ಸಹ ಹೀಗೆ ಸೀದಾ ಹೋಗ್ಬೇಕು ಅಂದಾಗ ಹೋದ ಜೀವ ಬಂದಂಗಾಯ್ತು. ಅಂತು ಒಂದು ಮನೆ ಕಾಣಿಸಿ  ಬಿಡ್ತು. ಜೋರಾಗಿ horn ಹಾಕ್ತಾ ಮನೆ ಕಡೆ ತಿರ್ಗಿದ್ವಿ. ಅದು ಆ ಸಂದರ್ಭಕ್ಕೆ ವಿಜಯದ ಕಹಳಯಂತಿತ್ತು. ನಂತರ ಮನೆ ಕಡೆ ನಡೆದೆವು. ಕ್ಷೇಮ ವಿಚಾರಿಸಿದ್ದಾಯ್ತು. 'ಆಸರೆಗೆ ಎಂತ ತಗೋತೀರಿ" ಅಂತ ಕೇಳಿದ್ದಾಯ್ತು. ಎಷ್ಟೊತ್ತಾದರೂ ಉಷಾ ಹೊರಗೆ  ಬರಲಿಲ್ಲ. "ಅಂಕಲ್, ಉಷಾ ಎಲ್ಲಿ?" ಅಂತ ಕೇಳಿದಾಗ ಅವರು "ಉಷಾನ, ಆ ತರ ಇಲ್ಲಿ ಯಾರು ಇಲ್ಲ" ಅಂದಾಗ ನಾನು "neevu ಈಶ್ವರ ಹೆಗಡೆ ಅಲ್ವ? " ಅಂದಾಗ "ಹೌದು, ಆದರೆ ಈಶ್ವರ ಹೆಗಡೆ ಅಂತ ಇಲ್ಲಿ ಇನ್ನೊಬ್ಬರಿದ್ದಾರೆ, ಅವರ ಮಗಳು ಉಷಾ" ಅಂದ್ರು. ಆಗ  ನಮಗೆ ತಿಳೀತು  ಇದು ಅವಳ ಮನೆ ಅಲ್ಲ ಅಂತ. ಇಷ್ಟು ಗೊತ್ತಾದ ಮೇಲೂ ಕೂಡ ಅವರು ಹೇಗೂ  ಬಂದಿದೀರಿ  ಇವತ್ತೊಂದಿನ  ಇದ್ದು  ಹೋಗಬಹುದಲ್ಲ" ಅಂದರು. ಮತ್ತೆ  ಬರ್ತೀವಿ  ಅಂತ ಹೇಳಿ ನಾವು  ಅವಳ ಮನೆಯ ವಿಳಾಸ ಕೇಳಿಕೊಂಡು ನಡೆದೆವು. ಕೊನೆಗೂ ಆಕೆಯ  ಮನೆ ಸಿಕ್ಕಿ, ಅಲ್ಲಿ ಆಗಿದ್ದೆಲ್ಲ  ಹೇಳಿ ತೆಳವು ಬೆಲ್ಲ ತಿಂದೆವು. ಹಾಗೆ ಬೆಟ್ಟಕ್ಕೆ ಹೋಗಿ  ಬರುವಷ್ಟರಲ್ಲಿ ಅಪ್ಪ  ಅಮ್ಮ  ಅಡಿಗೆಮನೆಗಂತೂ  ಬರೋದೇ ಇಲ್ಲ, ನಿದ್ದೆ ತುಂಬಾ.. ಹೀಗೆ ಅನಂತಾನಂತ ಅಸಮಾಧಾನಗಳನ್ನು ಪರಸ್ಪರ ಹಂಚಿಕೊಂಡಾಗಿತ್ತು. ಇಷ್ಟರಲ್ಲಿ  ಸಂಜೆ ಆಯಿತು. ಹೀಗೆ ಅಲ್ಲಿಂದ ಬರಬೇಕಾದರೆ  ಮಿಡಿಗಾಯಿ. ಜೋನಿಬೆಲ್ಲ ಹೀಗೆ ತುಂಬಾ ಏನೇನೋ ತಗೊಂಡು ಬಂದ್ವಿ. ಇವೆಲ್ಲ ದಿನ ಕಳೆದಂತೆ ಖಾಲಿ ಆದವು. ಆದರೆ 'ಅತಿಥಿ ದೇವೋಭವ' ಎಂಬ ಉಕ್ತಿಯ ಅರ್ಥವನ್ನು ಶಬ್ದಶಃ ತಿಳಿಸಿಕೊಟ್ಟ ಅ ವ್ಯಕ್ತಿಯ ಸದ್ಗುಣದ ನೆನಪು ಮಾತ್ರ ಮನದಲಿ ಮಾಸದೆ ಅಚ್ಚಾಗಿ ಉಳಿದಿದೆ. ಯಾರಾದರು ಬಾಗಿಲು ತಟ್ಟಿದಾಗ pinhole ಅಲ್ಲಿ ನೋಡಿ ನಂತರ ಬಾಗಿಲು ತೆಗೆಯೋ ಈ ಕಾಲದಲ್ಲಿ ಯಾರು ಎಂದು ಗೊತ್ತಿಲ್ಲದಿದ್ದರೂ ಒಂದು ದಿನ ಉಳಿದು ಹೋಗಬಹುದಿತ್ತು ಎಂದಾಗ ನನ್ನ ಮನಸ್ಸು ಅರಿವಿಲ್ಲದೆ ಸಲಾಂ ಹಾಕಿತ್ತು ಅವರ ದೊಡ್ದತನಕ್ಕೆ. ಆಗಿನಿಂದ ಶಿರಸಿ ಅಂದಾಗ ತೆಳವು,ಬೆಲ್ಲಕ್ಕೂ ಮುಂಚೆ ನೆನಪಾಗೋದು ಅದಕ್ಕಿಂತಲೂ ಸಿಹಿಯಾದ ವಿಶಾಲ ಹೃದಯತೆ, ಮುಗ್ದತೆ ಹಾಗೂ ಸದ್ಗುಣ. 

1 comment: